ತೆಸ್ಪಿಸ್ -
ಅರ್ಧ ಚಾರಿತ್ರಿಕ ಅರ್ಧ ಐತಿಹ್ಯದ ವ್ಯಕ್ತಿ. ಕ್ರಿಪೂ. ಸು. 6ನೆಯ ಶತಮಾನದ ಮಧ್ಯ ಭಾಗದಲ್ಲಿ ಉಚ್ಛ್ರಾಯ ಸ್ಥಿತಿಯಲ್ಲಿದ್ದನೆನ್ನಲಾಗಿದೆ. ಐಕೇರಿಯ ಇವನ ಊರೆಂದೂ ಪ್ರಾಚೀನ ಗ್ರೀಕ್ ಟ್ರ್ಯಾಜಡಿಯ ಬೆಳೆವಣಿಗೆಯಲ್ಲಿ ಇವನದ್ದು ಆದ್ಯಸ್ಥಾನವೆಂದೂ ರೂಢಿಯ ನಂಬಿಕೆ. ಆಕೃತಿಗೊಳ್ಳುತ್ತಿದ್ದ ಟ್ರ್ಯಾಜಡಿ ಪೂರ್ತಿ ನೃತ್ಯ ಸಂಗೀತಮಯವಾಗಿದ್ದ ಸಮಯದಲ್ಲಿ ಈತ ನೃತ್ಯಮೇಳದಿಂದ ಆಗಾಗ ಪ್ರತ್ಯೇಕನಾಗಿ ಮೇಳದವರೊಂದಿಗೆ ಸಂವಾದ ನಡೆಸುವ ಅಚರಣೆಯನ್ನು ಕಾರ್ಯಗತವಾಗಿಸಿದನಂತೆ. ಕಥೆಯ ಪಾತ್ರದ ಸೋಗಿನಲ್ಲಿ ಇವನೇ ತಾನು ಮೊದಲೇ ಬಾಯಿಪಾಠ ಮಾಡಿಕೊಂಡಿದ್ದ ಭಾಷಣವನ್ನು ಹೇಳಲಾರಂಭಿಸಿದನಂತೆ. ಮಧ್ಯದ ಗಷ್ಟಿನಿಂದ ಮುಖವನ್ನು ಬಣ್ಣಗೊಳಿಸಿಕೊಂಡು ಅಭಿನಯಿಸುತ್ತ ಕ್ರಮೇಣ ಹತ್ತಿ ಬಟ್ಟೆಯ ಮುಖವಾಡಗಳನ್ನು ಡಯಾರಿಸಿಕೊಂಡನಂತೆ. ಆಧಾರವಿಲ್ಲ; ಇರುವ ಆಧಾರವೆಲ್ಲವೂ ಬೇರೆ ಬೇರೆ ಅರ್ಥ ತಾತ್ಪರ್ಯಗಳಿಂದ ಸಂಶಯಗ್ರಸ್ತವಾಗಿದೆ; ಕ್ರಿ.ಪೂ. 534 ರಲ್ಲಿ ಇವನಿಗೆ ನಾಟಕ ಸ್ಫರ್ಧೆಯಲ್ಲಿ ಪ್ರಥಮ ಬಹುಮಾನ ಬಂದದ್ದೇನೋ ನಿಜ.

	ನೃತ್ಯ ಮೇಳದ ಜೂತೆಗೆ ಇನ್ನೊಬ್ಬ ನಟನನ್ನು ತಂದು ಕೂಡಿಸಿದ ಕಾರಣ ಟ್ರ್ಯಾಜಡಿಯನ್ನು ಮೊದಲು ರೂಪಿಸಿದಾತ ಈತನೇ ಎಂಬ ಅಭಿಪ್ರಾಯಕ್ಕೆ ಕೊಂಚ ಮನ್ನಣೆ ಇದೆ. ಆದರೆ ಟ್ರ್ಯಾಜಡಿಯನ್ನು ಕುರಿತು ಅನೇಕ ವಿಷಯಗಳನ್ನು ಹೇಳಿದ ಅರಿಸ್ಟಾಟಲ್ ಈತನ ಹೆಸರನ್ನು ತನ್ನ ಬರೆಹದಲ್ಲಿ ಎಲ್ಲಿಯೂ ತಂದಿಲ್ಲ. ಒಟ್ಟಿನಲ್ಲಿ ನಾಟಕವೆಂಬುದು ಇನ್ನೂ ಅಸ್ಪಷ್ಟ ಆಕೃತಿಯಲ್ಲಿದ್ದಾಗ, ನೃತ್ಯದವರನ್ನು ಬಂಡಿಗಳಲ್ಲಿ ತಂದು, ನಟನಾಗಿ ನಿಂತು, ಅದಕ್ಕೆ ವೈಲಕ್ಷಣ್ಯವನ್ನು ಒದಗಿಸಿದ ಯಶಸ್ಸು ಇವನದ್ದೆಂದೂ ಸ್ಥೂಲವಾಗಿ ಹೇಳಬಹುದು.

ಅಂತೂ ತೆಸ್ಪಿಯನ್ ಕಲೆ ಎಂಬ ಮಾತು ರೂಪಕ ಸಾಹಿತ್ಯದಲ್ಲಿ ಒಂದು ಪಾರಿಭಾಷಿಕ ಶಬ್ಧವಾಗಿದೆ.
(ಎಸ್.ವಿ.ಆರ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ